ಮಂಡೆಲಾ ಎನ್ನುವ ಮಹೋನ್ನತ ವ್ಯಕ್ತಿತ್ವ.
ಲೋಹದ ಸರಪಳಿಯನ್ನು ಮುರಿದು ಸ್ವಾತಂತ್ರ ನೀಡಿದ ಚಿನ್ನದ ವ್ಯಕ್ತಿತ್ವ. ನೆಲ್ಸನ್ ಮಂಡೆಲಾ: "ಒಬ್ಬ ವ್ಯಕ್ತಿಯನ್ನು ಸೆರೆಮನೆಗೆ ಹಾಕುವುದು ಸುಲಭ. ಆದರೆ ಅವನ ಕನಸುಗಳನ್ನು, ಅವನ ಚಿಂತನೆಗಳನ್ನು, ಅವನ ನ್ಯಾಯದ ನಂಬಿಕೆಯನ್ನು ಸೆರೆಹಿಡಿಯುವುದು ಅಸಾಧ್ಯ." ಇತಿಹಾಸವು ಕೆಲವರನ್ನು ಆಡಳಿತಗಾರರೆಂದು ನೆನಪಿಸಿಕೊಳ್ಳುತ್ತದೆ. ಕೆಲವರನ್ನು ವಿಜಯಿಗಳೆಂದು ಸ್ಮರಿಸುತ್ತದೆ. ಆದರೆ ಕೆಲವು ಅಪರೂಪದ ವ್ಯಕ್ತಿಗಳನ್ನು ಮಾತ್ರ ಮಾನವೀಯತೆಯ ಪ್ರತೀಕವಾಗಿ ಉಳಿಸಿಕೊಳ್ಳುತ್ತದೆ. ಅಂತಹ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ನೆಲ್ಸನ್ ರೋಲಿಹ್ಲಾಹ್ಲಾ ಮಂಡೆಲಾ. ಅವರ ಬದುಕು ಒಬ್ಬ ವ್ಯಕ್ತಿಯ ಯಶೋಗಾಥೆಯಲ್ಲ; ಅದು ಒಂದು ರಾಷ್ಟ್ರದ ಆತ್ಮಗೌರವದ ಪುನರ್ಜನ್ಮದ ಕಥೆ. ಕಪ್ಪು ಮತ್ತು ಬಿಳಿ ಎಂಬ ಹೆಸರಿನಲ್ಲಿ ವಿಭಜನೆಯಾದ ಸಮಾಜಕ್ಕೆ ಸಮಾನತೆಯ ಭಾಷೆಯನ್ನು ಕಲಿಸಿದ ನಾಯಕನ ಕಥೆ. ಜೈಲಿನ ಕತ್ತಲೆಯಲ್ಲಿಯೂ ಸ್ವಾತಂತ್ರ್ಯದ ಕನಸನ್ನು ಜೀವಂತವಾಗಿಟ್ಟ ವ್ಯಕ್ತಿಯ ಕಥೆ. 1918ರ ಜುಲೈ 18ರಂದು ದಕ್ಷಿಣ ಆಫ್ರಿಕಾದ ಮ್ವೆಜೋ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಮಂಡೆಲಾ, ರಾಜವಂಶದ ಹಿನ್ನೆಲೆಯ ಕುಟುಂಬದಿಂದ ಬಂದರೂ, ಬಾಲ್ಯದಲ್ಲಿಯೇ ಸಾಮಾನ್ಯ ಜನರ ಕಷ್ಟಗಳನ್ನು ಕಂಡರು. ಶಿಕ್ಷಣವು ಮನುಷ್ಯನನ್ನು ಬದಲಾಯಿಸಬಲ್ಲದು ಎಂಬ ನಂಬಿಕೆ ಅವರದು ಉತ್ತಮವಾಗಿ ಓದಿದ ಅವರು ನಂತರ ವಕೀಲರಾದರು. ಆದರೆ ಅವರು ಓದಿದ ಕಾನೂನು ಪುಸ್ತಕಗಳಲ್ಲಿ ನ್ಯ...