ಕನ್ನಡಮಯ ಮಹಾರಾಷ್ಟ್ರ


ಕನ್ನಡಮಯ ಮಹಾರಾಷ್ಟ್ರ
 ಯಾರೂ ತಿಳಿಯದ ಇತಿಹಾಸದ ಕಟು ಸತ್ಯಗಳು ಕಳೆದು ಹೋದ
 ಕನ್ನಡ ಭಾಷೆ ,
 ಕನ್ನಡದ ನೆಲ,
 ಕನ್ನಡದ ಜಲ……

 ದಕ್ಷಿಣ ಭಾರತವಷ್ಟೆ ಅಲ್ಲ, ಸಮಸ್ತ ಭಾರತದ ಇತಿಹಾಸದಲ್ಲಿ ಕರ್ನಾಟಕವು ಬಹಳಷ್ಟು ಬಾರಿ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಅದೆಷ್ಟೋ ಬಾರಿ ಕರ್ನಾಟಕವು ಭಾರತದ ಇತಿಹಾಸದ ನದಿಯ ಹರಿವ ದಿಕ್ಕನ್ನೆ ಬದಲಿಸಿದೆ.

 ಸ್ನೇಹಿತರೆ,

    ನಾವು ಕೇವಲ ಇತಿಹಾಸದ ಸಮಯದಲ್ಲಿನ ಕರ್ನಾಟಕ ಅಷ್ಟೆ ಅಲ್ಲ, ಇತಿಹಾಸ ಪೂರ್ವದಲ್ಲಿಯೂ ಸಹ ಕನ್ನಡ ಇರುವಿಕೆಯನ್ನು ಸಿಂಧೂ ಸರಸ್ವತಿ ನಾಗರಿಕತೆಯ ಸಂದರ್ಭದಲ್ಲಿಯೆ ಪತ್ತೆ ಹಚ್ಚಬಹುದು. ಆಗಿನ ಸಿಂಧೂ ನದಿ ನಾಗರಿಕತೆ ಅಂದರೆ ನಮ್ಮದೆ ಆದ ಹರಪ್ಪ ನಾಗರಿಕತೆಗೆ ಚಿನ್ನ ದ ಪೂರೈಕೆ ಇಲ್ಲಿಂದಲೆ ಆಗುತ್ತಿತ್ತು ಎನ್ನುವುದನ್ನು ನಮ್ಮ ಪುರಾತನ ತಜ್ಞರು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಮಹಾಭಾರತದ ಯುದ್ದದಲ್ಲಿಯೂ ಸಹ ನಮ್ಮ ಕನ್ನಡದ ಸೈನಿಕರು ಹೋರಾಡಿದ್ದನ್ನು ವ್ಯಾಸ ಭಾರತದಲ್ಲಿ ದಾಖಲೆಯಲ್ಲಿದೆ. 

    ಇನ್ನೂ ಕನ್ನಡದ ಇತಿಹಾಸವಂತೂ ಅಗಣಿತ ಸೈನಿಕ ಸಾಹಸಗಳಿಂದ, ಅಪೂರ್ವ ಕಲಾಸೌಂದರ್ಯದ ವಾಸ್ತಶಿಲ್ಪಗಳಿಂದಗಳಿಂದ ತುಂಬಿದೆ. ಪ್ರಾಚೀನದಿಂದಲೂ ಉತ್ತರ ಮತ್ತು ದಕ್ಷಿಣಗಳನ್ನು ಬೆಸೆದ ರಾಜ್ಯ ನಮ್ಮ ಹೆಮ್ಮೆಯ ಕರ್ನಾಟಕ. ಇದರಿಂದ ನಾವು ಪಡೆದುಕೊಂಡಿದ್ದು ಕೆಲವೊಂದಿಷ್ಟಾದರೂ ಬಹಳಷ್ಟನ್ನು ಕಳೆದುಕೊಂಡಿದ್ದು ಸಹ ಅಷ್ಟೆ ಸತ್ಯ. ಒಂದು ನಾಗರಿಕತೆಯ ಪರ್ಯಾಯವಾಗುವಷ್ಟು ಸಂಪದ್ಭರಿತತೆಯನ್ನು ಹೊಂದಿರುವ ನಮ್ಮ ಕನ್ನಡ ನಾಡಿನಿಂದ ನಾವು ಏನನ್ನು ಪಡೆದುಕೊಂಡೆವು, ಇನ್ನೂ ಏನನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎಂಬುವುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ. ಆತ್ಮಿಯರೆ, ನಿಮ್ಮೆಲ್ಲರಿಗೂ ಸುರದೀಪ್ತಿ ಬ್ಲಾಗ್‌ / ಮಿತಾಕ್ಷರ ವಾಹಿನಿಗೆ ಸ್ವಾಗತ. 

     ಕಲೆ, ಸಾಹಿತ್ಯ ವಾಸ್ತುಶಿಲ್ಪ, ಇತಿಹಾಸ ವಿಜ್ಞಾನ, ಸಂಸ್ಕೃತಿ ಹೀಗೆ ಹಲವಾರು ವಿವಿಧ ಕ್ಷೇತ್ರಗಳ ಬೆಳವಣಿಗೆ ಬಗ್ಗೆ ನಾವು ಈ ವಾಹಿನಿಯಲ್ಲಿ ಚರ್ಚೆ ಮಾಡುತ್ತೆವೆ. ಕನ್ನಡದಲ್ಲಿನ ಡಿಜಿಟಲ್ ಜ್ಞಾನ ಪ್ರಸಾರದಲ್ಲಿ ನಮ್ಮದೊಂದು ಪುಟ್ಟ ಕಾಣಿಕೆ. ಹಾಗೆ ಈ ಲೇಖನ ಸಮಚಿತ್ತ ಹಾಗೂ ನೈಜತೆಯಿಂದ ಕೂಡಿರುವ ವಿಷಯಗಳನ್ನು ಒಳಗೊಂಡಿದೆ ಎಂದಾದಲ್ಲಿ ನಿಮ್ಮದೊಂದು ಲೈಕ್‌ ಇರಲಿ. ಮರೆಯದೆ ಸಬ್ಸ್ಕೈಬ್‌ ಮಾಡಿ. 
   ನಿಮಗೆ ಕನ್ನಡದ ಪಂಪ ಮಹಾಕವಿ ಹೇಳಿರುವ ಈ ಮಾತು ನೆನಪಿರಬಹುದು…. 
 ತೆಂಕಣ ಗಾಳಿ ಸೋಂಕಿದೊಡ ಮೊಳ್ನುಡಿಗೇ ಒಳ್ದೊ ಡಮಿಂಪನ 
ಆಳ್ದಗೇಯಂ ಕಿವಿವೊಕ್ಕೊಡಂ ಬಿರದ 
ಮಲ್ಲಿಗೆ ಗಂಡೊಡಮಾದ ಕೆಂದಲಂಪಂ 
ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡ 
ಮೇನನೆಂಬೆನ ಆರಂಕುಸವಿಟ್ಟೊಡಂ 
ನೆನೆವುದೆನ್ನ ಮನಂ ವನವಾಸಿ ದೇಶಮಂ 
 ಪಂಪ ಮೂಲತಃ ಕನ್ನಡನಾಡಿನವನು. ಆತನ ತಾಯಿಯ ತವರುಮನೆ ಧಾರವಾಡ ಪ್ರದೇಶದ ಅಣ್ಣಿಗೆರಿ. ಆತ ಕನ್ನಡ ಮೂಲದ್ದೆ ವಂಶವಾದ ವೆಂಗಿ ಚಾಳುಕ್ಯರ ಆಸ್ಥಾನದಲ್ಲಿದ್ದವನು. ಅವನಿಗೆ ಎಲ್ಲ ಸುಖ ಸಂಪತ್ತು ಸಿಕ್ಕಿದರು ಅವನು ಕನ್ನಡವನ್ನು ಅದೆಷ್ಟು ಪ್ರೀತಿಸುತ್ತಿದ್ದನು ಎನ್ನುವದನ್ನು ಈ ಒಂದು ಪದ್ಯದ ಮೂಲಕ ಅರ್ಥಮಾಡಿಕೊಳ್ಳಬಹುದು, ಇದು ಏಕೆಂದರೆ ಆತನ ಹಿನ್ನೆಲೆಯ ಬಿಂಬ ಕನ್ನಡದಾಗಿತ್ತು. ಆತನಿಗೆ ಕನ್ನಡವೆ ಉಸಿರಾಗಿತ್ತು…

    ಇನ್ನೊಬ್ಬಳು ಅತ್ತಿಮಬ್ಬೆ. ಪ್ರಾಯಶಃ ನೀವು ಜನ ಅವಳೀಗೆ ನೀಡಿದ ಬಿರುದಿನಿಂದ ಅವಳನ್ನು ಗುರುತಿಸಬಹುದು. ದಾನಚಿಂತಾಮಣಿ ಎಂಬುದು ಅವಳ ಬಿರುದು. ಅವಳಿಗೆ ಕನ್ನಡವೆ ಧ್ಯೇಯವಾಗಿತ್ತು. 
ಇನ್ನೂ ಶರಣರು, ದಾಸರ ಕನ್ನಡ ಬಗೆಗಿನ ಪ್ರೀತಿ ಅಂತೂ ಹೇಳುವಂತಿಲ್ಲ. ಅವರ ಸಾಮಾಜಿಕ ಚಳುವಳಿಯ ಅಸ್ತಿತ್ವವೆ ಕನ್ನಡವಾಗಿತ್ತು. ಆದರೆ ಅದೆ ಕನ್ನಡದ ನೆಲದಲ್ಲಿ ಇರುವ ನಾವು ನಿಜವಾಗಿಯೂ ಕನ್ನಡವನ್ನೆ ಉಸಿರಾಡುತ್ತಿದ್ದವೆಯೆ???? ಇಲ್ಲ, ನೀವು ಹೌದು ಎಂದಾದರೆ, ಏಕೆಂದರೆ ಕನ್ನಡ ಸಾಯುತ್ತಿರುವ ಭಾಷೆಗಳ ಪಟ್ಟಿಯಲ್ಲಿ ಇರುತ್ತಿರಲಿಲ್ಲ. 

  ಗೋದಾವರಿಯ ಮಡಿಲಿನೋಳ್......
 ನಮ್ಮ ದೇಸಿ ಕನ್ನಡ ಎಲ್ಲಕ್ಕಿಂತಲೂ ನಮಗೆ ಬಹು ಪ್ರಿಯ… ಅದು ಮಂಡ್ಯ ಕನ್ನಡವೆ ಇರಲಿ, ಬೀದರ್ ನ ಬಹುರೂಪಿ ಕನ್ನಡವೆ ಇರಲಿ…. ಇನ್ನೂ ಪ್ರಾದೇಶಿಕತೆಯ ವಿಷಯಕ್ಕೆ ಬಂದಾಗ, ಕವಿರಾಜ ಮಾರ್ಗಕಾರನ ಈ ವಾಕ್ಯವನ್ನು ಗಮನಿಸಿ. 


ಕಾವೇರಿಯಿಂದಮಾ ಗೋದಾವರಿವರಮಿರ್ಪ 
ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ
ವಸು ಧಾವಳಯ ವಿಲೀನ ವಿಶದ ವಿಷಯ 
ವಿಶೇಷಂ ಪದನರಿದು ನುಡಿಯಲುಂ ನುಡಿ 
ದುವನರಿದಾರಯಲುಮಾರ್ಪರಾ ನಾಡವರ್ಗಳ್ 
ಚದುರರ್ ನಿಜದಿಂ ಕುರಿತೋ ದದೆಯುಂ 
ಕಾವ್ಯ ಪ್ರಯೋಗ ಪರಿಣತ ಮತಿಗಳ್ ---- 

 ಕಸವರಮೆಂಬುದು ನೆರೆ ಸೈ ರಿಸಲಾರ್ಪೊಡೆ 
ಪರ ವಿಚಾರಮುಂ ಧರ್ಮಮುಮಂ ಕಸವೇಂ
ಕಸವರಮೇನು ಬ್ಬಸಮಂ ಬಸಮಲ್ಲದಿರ್ದು 
ಮಾಡುವರೆಲ್ಲಂ 
    ಈ ಪದ್ಯದಲ್ಲಿ ಕವಿರಾಜಮಾರ್ಗಕಾರ ನಮ್ಮ ಕನ್ನಡನಾಡಿ ವ್ಯಾಪ್ತಿ, ಇಲ್ಲಿನ ಕನ್ನಡಿಗರ ಗುಣರುಚಿಗಳನ್ನು ಹೇಳುತ್ತಾನೆ. ಇಲ್ಲಿ ಒಂದು ವಿಷಯವನ್ನ ನೀವು ಗಮನಿಸಿ, ಅದು 
ʼʼಕಾವೇರಿಯಿಂದಮಾ ಗೋದಾವರಿ ವರ ಮಿರ್ದ ಕನ್ನಡ ನಾಡೋಳ್‌ʼʼ ಅಂತ. ಪುಣ್ಯಕ್ಕೆ ಕಾವೇರಿ ಇನ್ನೂ ನಮ್ಮಲ್ಲಿಯೆ ಇದೆ. ಆದರೆ, ಗೋದಾವರಿ???? 
   ಗೋದಾವರಿ ನಮ್ಮಿಂದ ತುಂಬಾ ದೂರವಾಗಿ ಬಿಟ್ಟಿದೆ. ಆದರೆ ಅದು ಒಂದಾನೋಂದು ಕಾಲದಲ್ಲಿ ನಮ್ಮ ಕನ್ನಡ ನಾಡಿನಲ್ಲೆಇತ್ತು ಎನ್ನುವುದನ್ನು ನಾವು ಇನ್ನು ನಮ್ಮ ಕನ್ನಡ ನಾಡಿನಲ್ಲಿ ಮತ್ತು ಪಕ್ಕದ ಮಹಾರಾಷ್ಟ್ರದಲ್ಲಿ ಇರುವ ಪಳೆಯುಳಿಕೆಗಳಿಂದ ಗುರುತಿಸಬಹುದು. ಇಂದಿಗೂ ಬೀದರ್‌ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಅದೆಷ್ಟೂ ತಂದೆತಾಯಿಗಳು ತಮಗೆ ಜನಿಸುವ ಹೆಣ್ಣುಮಕ್ಕಳಿಗೆ ಗೋದಾವರಿ ಎಂದು ಹೆಸರಿಡುತ್ತಾರೆ. ಗೋದಮ್ಮ, ಗೋದುತಾಯಿ, ಗೋದಾವರಿ ಎಂಬ ಹೆಸರುಗಳು ಇಲ್ಲಿ ತೀರ ಸಾಮನ್ಯ, ಅಲ್ಲದೆ ಇಲ್ಲಿ ಗೋದಿಹಿಪ್ಪರಗೆ, ಗೋದಿ ಮಂಡಲ, ಗೋದೇಶ್ವರ ಎಂಬ ಹೆಸರಿನ ಊರುಗಳು ದೇವಾಲಯಗಳು ಸಹ ಸಾಕಷ್ಟಿವೆ. ಇದು ಇಲ್ಲಿನ ಕನ್ನಡಿಗರು ಗೋದಾವರಿ ನದಿಯೊಂದಿಗೆ ಹೊಂದಿಕೊಂಡಿದ್ದರ ಹಳೆಯ ಕುರುಹಗಳು.

  ‌
ಮಹಾರಾಷ್ಟ್ರದ ದೇವ-ದೈವಗಳ ತವರು ಕರ್ನಾಟಕ......
   ಇನ್ನು ನೆರೆಯ ಮಹಾರಾಷ್ಟ್ರದಲ್ಲಿ ಗಮನಿಸೋಣ. ಅಲ್ಲಿನ ತುಂಬಾ ಖ್ಯಾತವಾಗಿರುವ ಕೆಲವೋಂದಿಷ್ಟು ದೇವಸ್ಥಾನಗಳು, ತುಳಜಾಪುರದ ಅಂಭಾ ಭವಾನಿ ದೇಗುಲ, ವಿಠ್ಠಲ ದೇವಸ್ದಾನ ದಲ್ಲಿನ ವಿಠ್ಠಲ ದೇವರು, ಇನ್ನುಈ ಭಾಗದ ಕುರುಬ ಸಮುದಾಯದ ದೈವವಾಗಿರುವ ಮಲ್ಲಾರಿ, ಈ ಎಲ್ಲಾ ದೈವಗಳ ಕುರಿತಾದ ತುಂಬಾ ಹಳೆಯ ಹಾಡುಗಳಲ್ಲಿ ಸಹ ಕಾನಡಾಆಯಿ, ಅಂದ್ರೆ ಕನ್ನಡ ತಾಯಿ ತುಳಜಾ ಭವಾನಿ, ಕಾನಡಾ ರಾಜಾ ವಿಠ್ಠಲ ಅಂದ್ರೆ ಕನ್ನಡ ರಾಜನಾದ ಪಂಡರಿನಾಥ , ಮತ್ತು ಕನ್ನಡದ ಮಲ್ಲಾರಿ ಎಂದೆ ಕರೆಯಲಾಗಿತ್ತದೆ…. 
    ಹೇಳಿ ಕೇಳಿ ಭಾರತದ ಜನಮಾನಸವನ್ನು ದೈವ-ಧರ್ಮ ಪ್ರಭಾವಿಸುವಷ್ಟು ಬೇರೆ ಯಾವುದೆ ಅಂಶಗಳು ಪ್ರಾಯಶ: ಇಂದಿಗೂ ಪ್ರಭಾವಿಸುವುದಿಲ್ಲ. ಕಾರಣವೆನೆಂದರೆ, ನಮ್ಮ ಅಂತಸತ್ವ ಅಡಗಿರುವುದೆ ಇಲ್ಲಿ. 

ಕನ್ನಡದ ದೊರೆಗಳು ಮಹಾರಾಷ್ಟ್ರದಲ್ಲಿ....
  ಮಹಾರಾಷ್ಟ್ರದ ಬಹುಭಾಗವನ್ನಾಳಿದ ಶಿಲಾಹಾರ ಎನ್ನುವ ಒಂದು ರಾಜಮನೆತನ ಪರಿಪೂರ್ಣವಾಗಿ ಕನ್ನಡ ಮನೆತನವಾಗಿತ್ತು. ಅವರು ಈಗಿನ ಮುಂಬೈ ಸಮೀಪದಲ್ಲಿ ಬಹುದೊಡ್ಡ ಪ್ರದೇಶವನ್ನು ಆಳುತ್ತಿದ್ದರು. ಅವರನ್ನು ಇತಿಹಾಸಕಾರರು ಕೊಂಕಣದ ಶಿಲಾಹಾರರು ಎಂದೆ ಕರೆಯುತ್ತಾರೆ. ಇವರ ರಾಜರುಗಳ ಹೆಸರುಗಳನ್ನುನೋಡಿ. ಸಣ್ಣಪುಲ್ಲ, ವಪ್ಪುವಣ್ಣ, ಜಟ್ಟಿಗ, ಗಂಡರಾದಿತ್ಯ, ಮಾರಸಿಂಹ, ಢಡಿಯಪ್ಪ,ಭಿಲ್ಲಮ, ರಾಜುಗಿ, ವಾಸುಗಿ ಇತ್ಯಾದಿ. ಅವರು ಬಾದಾಮಿ ಚಾಳೂಕ್ಯರು, ರಾಷ್ರ್ಟಕೂಟರು ಹಾಗೂ ಬಹುಮುಖ್ಯರಾದ ಕಲ್ಯಾಣದ ಚಾಳುಕ್ಯರಿಗೆ ರಕ್ತಸಂಬಂಧಿಗಳಾಗಿದ್ದರು. ಇದೆ ಶಿಲಾಹಾರ ಮನೆತನದ ರಾಜಕುಮಾರಿ ಚಂದ್ರೆಲೇಖೇ ಕಲ್ಯಾಣದ ಚಕ್ರವರ್ತಿ ಆರನೆ ವಿಕ್ರಮಾದಿತ್ಯನ ರಾಣಿಯಾಗಿದ್ದಳು. 
     ಈ ಶಿಲಾಹಾರ ಮನೆತನವನ್ನು ಸೋಲಿಸಿ ಆಡಳಿತಕ್ಕೆ ಬಂದ ದೇವಗಿರಿಯ ಸೇವುಣರು ತಮ್ಮನ್ನು ತಾವು ಕನ್ನಡದ ದೊರೆಗಳೆಂದೆ ಹೇಳಿಕೊಳ್ಳುತ್ತಾರೆ. ಆದರೆ ಮರಾಠಿ ಇತಿಹಾಸಕಾರರು ಇವರನ್ನು ಉದ್ದೇಶಪೂರ್ವಕವಾಗಿ ಯಾದವರು ಎಂದೆ ಸಂಭೋದಿಸುತ್ತಾರೆ, ಕಾಕತೀಯರು, ಹೋಯ್ಶಳರು ಮತ್ತು ಮುಖ್ಯವಾಗಿ ಕಲ್ಯಾಣದ ಚಾಳುಕ್ಯರ ಶಾಸನಗಳಲ್ಲಿ ಇವರನ್ನು ಸೇವುಣರು ಎಂದು ಸಂಭೋದಿಸಲಾಗಿದೆ, ಅಷ್ಟೆ ಏಕೆ ಸ್ವತಃ ಈ ವಂಶದ ರಾಜರುಗಳೆ ತಮ್ಮ ಶಾಸನಗಳಲ್ಲಿ ತಾವು ಕನ್ನಡ ವಂಶದವರು ಎಂದು ಕರೆದುಕೊಂಡಿದ್ದಾರೆ. 
   ಡಾ.ಸಿ.ಎಮ್.ಕುಲಕರ್ಣಿ. ಕಾಲಿನ್ ಮಸೀಕಾ, ಡಾ. ಶ್ರೀನಿವಾಸ ರಿತ್ತಿ ಮೊದಲಾದ ಸಂಶೋಧಕರು, ಸೇವುಣರು ಮೂಲತಃ ಕನ್ನಡಿಗರಾಗಿದ್ದರು ಎಂದು ಪ್ರತಿಪಾದಿಸುತ್ತಾರೆ. ಭಾಷಾಶಾಸ್ತ್ರಜ್ಞ ಕಾಲಿನ್ ಮಸೀಕಾರ ಪ್ರಕಾರ ಸೇವುಣರು ಕನ್ನಡ ಭಾಷಿಕರಾಗಿದ್ದು , ತಮ್ಮ ಶಾಸನಗಳಲ್ಲಿ ಸಂಸ್ಕೃತದೊಂದಿಗೆ ಕನ್ನಡವನ್ನೂ ಬಳಸಿದ್ದಾರೆ. ಅನೇಕ ಸೇವುಣ ರಾಜರುಗಳ ಹೆಸರು ಅಥವಾ ಬಿರುದು ಕನ್ನಡ ಮೂಲದವಾಗಿವೆ. ಉದಾಹರಣೆಗೆ ಧಡಿಯಪ್ಪ, ಭಿಲ್ಲಮ, ರಾಜುಗಿ, ವಾಸುಗಿ. ಕಲಿಯ ಬಲ್ಲಾಳ ಇತ್ಯಾದಿ. ಇನ್ನೂ ಕೆಲ ರಾಜರ ಸಿಂಘಣ , ಮಲ್ಲುಗಿ ಎಂಬ ಹೆಸರುಗಳು ಕಲ್ಯಾಣಿ ಕಲಚೂರ್ಯರ ಹೆಸರುಗಳನ್ನು ಹೋಲುತ್ತವೆ. ಅಷ್ಟೇ ಅಲ್ಲ, ಸೇವುಣರ ರಾಜ್ಯದ ಐನೂರಕ್ಕೂ ಹೆಚ್ಚು ಶಿಲಾಶಾಸನಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ ಎರಡನೆಯ ಭಿಲ್ಲಮನ ಕಾಲದ ಶಾಸನ ಅತ್ಯಂತ ಹಳೆಯದಾಗಿದ್ದು, ಈ ಬಹುತೇಕ ಶಾಸನ ಭಾಷೆ ಕನ್ನಡವಾಗಿದೆ. ಇನ್ನೂ ಅನೇಕ ಶಾಸನಗಳ ಭಾಷೆ ದೇವನಾಗರಿ ಲಿಪಿಯಲ್ಲಿ ಬರೆದ ಕನ್ನಡವಾಗಿದೆ. 
   ಸೇವುಣರ ಮೊದಮೊದಲ ನಾಣ್ಯಗಳಲ್ಲಿ ಕನ್ನಡ ಲಾಂಛನಗಳಿವೆ. ಇವೆಲ್ಲವುಗಳ ಆಧಾರದ ಮೇಲೆ, ಡಾ. ಓ.ಪಿ.ವರ್ಮಾ ಮೊದಲಾದ ವಿದ್ವಾಂಸರು, ಸೇವುಣರ ರಾಜ್ಯದಲ್ಲಿ , ಮತ್ತು ಸಂಸ್ಕೃತದೊಂದಿಗೆ ಕನ್ನಡವೂ ರಾಜಭಾಷೆಯಾಗಿರುವುದು ಖಂಡಿತ ಎಂಬ ನಿರ್ಧಾರಕ್ಕೆ ಬರುತ್ತಾರೆ. ಇವರು ರಾಷ್ರ್ಟಕೂಟರ ಸಾಮಂತರಾಗಿ ಆಡಳಿತಕ್ಕೆ ಬಂದರು, ವಿದ್ವಾಂಸರ ಪ್ರಕಾರ ಇವರು ಧಾರವಾಡ ಸಮೀಪ, ಮೂಲದಲ್ಲಿ ಆಡಳಿತ ನಡೆಸುತ್ತಿದ್ದವರನ್ನು ರಾಷ್ಟ್ರಕೂಟರು ಉತ್ತರದ ಆಡಳಿತ ನೋಡಿಕೊಳ್ಳಲು ಗೋದಾವರಿ ಭಾಗಕ್ಕೆ ಕಳುಹಿಸಿದರು ಎಂಬುದನ್ನು ತಿಳಿಸುತ್ತಾರೆ, ಸೇವುಣರ ರಕ್ತಸಂಬಂಧಿಗಳಾಗಿದ್ದ ಅವರ ಅನೇಕ ದಂಡನಾಯಕರು ಕನ್ನಡ ಭಾಷಿಕರಾಗಿದ್ದರು. 
   ಸೇವುಣರ ಮಾಸವಾಡಿಯು ಇಂದಿನ ಧಾರವಾಡ ಪ್ರದೇಶದಲ್ಲಿತ್ತು. ಇನ್ನು ಈ ವಂಶದ ರಾಜನಾಗಿದ್ದ ಸಿಂದ ಎಂಬ ದೊರೆಯ ಹೆಸರಿನಲ್ಲಿ ಕರ್ನಾಟಕದ ಗಡಿಯುದ್ದಕ್ಕೂ ಅನೇಕ ಊರುಗಳಿವೆ. ಸಿಂದನಕೆರೆ. ಸಿಂದಬಂದಗಿ,ಸಿಂದನ ಹಳ್ಳ ಹೀಗೆ … ಪ್ರಾಯಶಃ ಈ ದೊರೆಯು ತದನಂತರದಲಿ ಇಲ್ಲೆ ಕೆಲ ಕಾಲ ನೆಲೆ ನಿಂತಿರಬಹುದಾಗಿರುವ ಸಾಧ್ಯತೆ ಇದೆ, ಊರಿನ ಹೆಸರುಗಳು ಸಹ ಅಂತಹುದೆ ಸಾಧ್ಯತೆಯನ್ನು ತಿಳಿಸುತ್ತವೆ. 
 ನಿಮಗೆ ರಾಷ್ಟ್ರಕೂಟರ ಮೂಲಸ್ಥಾನ ಈಗಿನ ಗೋದಾವರಿ ಸಮೀಪದಲ್ಲಿರುವ ಲಾತೂರು ಎಂಬ ಪ್ರದೇಶ. ಇದನ್ನು ಆಗ ಲಟ್ಟಲೂರು ಎಂದು ಕರೆಯುತ್ತಿದ್ದರು. ಇವರು ತಮ್ಮ ಶಾಸನಗಳಲ್ಲಿ ಲಟ್ಟಲೂರು ಪುರವರಾಧೀಶ್ವರರು ಎಂದು ಕರೆಯಲಾಗುತ್ತಿತ್ತು.ಇದು ಆಗಿನ ಕಾಲದಲ್ಲಿ ಲಾತೂರು ಮತ್ತು ಸುತ್ತಮುತ್ಲಿನ ಭಾಗವೆಲ್ಲವೂ ಸಂಪೂರ್ಣ ಕನ್ನಡಮಯವಾಗಿತ್ತು ಎಂಬುವುದನ್ನು ಬಹು ಸ್ಪಷ್ಟವಾಗಿ ತಿಳಿಸುತ್ತದೆ. 
  ಕನ್ನಡದ ಊರುಗಳು ಸಾವಿರಾರು.....
   ಮಹಾರಾಷ್ಟ್ರದಲ್ಲಿ ಇರುವ ಕೆಲವೊಂದಿಷ್ಟು ಊರುಗಳ ಬಗ್ಗೆ ಸ್ವಲ್ಪ ಗಮನ ಹರಿಸುವವುದಾದರೆ, ಅವೆಲ್ಲವೂಗಳು ಬಹುತರವಾಗಿ ಕನ್ನಡದ ಹೆಸರುಗಳೇ ಇರುತ್ತವೆಂಬುದನ್ನು ಕೇಳಿ,ನಿಮಗೆ ಖಂಡಿತ ಆನಂದವೂ ಆಶ್ಚರ್ಯವೂ ಆಗದಿರದು. "ಕೆಂದೂರು" ಎಂಬ ಶುದ್ಧ ಕನ್ನಡದ ಹೆಸರಿನ ಊರು ಪುಣೆಯ ಹತ್ತಿರ ಇರುತ್ತದೆ. ಇದಲ್ಲದೆ, ಠಾಣಾ, ಕುಲಾಬಾ, ರತ್ನಾಗಿರಿ ಮುಂತಾದ ಮರಾಠೀ ಜಿಲ್ಲೆಗಳಲ್ಲಿಯೂ, ಕನ್ನಡದ ಹೆಸರಿನ ಗ್ರಾಮಗಳು ತುಂಬಿವೆ, ಉದಾಹರಣೆಗಾಗಿ -- ಪೊಯನಾಡು,ಶಿರೂರು, ಶಿರೋಳ, ಕಲ್ಲಮಠ, ದೇವರಕೊಪ್ಪ, ಅಕ್ಕಲಕೊಪ್ಪ, ಉಳವಿ, ಅತ್ತಿಗೇರೆ, ಮೊಸಳೆ, ನೇರೂರು, ಪಾಳೆ, ದೇವೂರು, ಡೋಣಿ, ನಿರ್ಗಡೆ, ಕಣಕವಲ್ಲಿ, ಬ್ರಹ್ಮನಾಳ, ಗಾಣಗಾಪುರ, ಕುರಡೀವಾಡಿ, ಅಕ್ಕಲಕೋಟೆ,ಕಳಸ ಇವೇ ಮುಂತಾದ ಗ್ರಾಮಗಳು ಮಹಾರಾಷ್ಟ್ರದಲ್ಲಿ ಕಂಡುಬರುತ್ತವೆ. 
   ಬೀದರ ಜಿಲ್ಲೆಯಲ್ಲಿ ಒಂದು ಊರು ಇದೆ, ಅದರ ಹೆಸರು ಡಾವರಗಾವ… ಆ ಊರಿನಲ್ಲಿ ಮರಾಠರು ಮತ್ತು ಕನ್ನಡಿಗರು ಇರ್ವರು ಇರುತ್ತಾರೆ. ಮರಾಠರ ಆ ಊರನ್ನು ಡಾವರಗಾಂವ ಎಂದು ಹಿಂದಿಕರಿಸಿ ಕರೆದರೆ ಕನ್ನಡದವರು ಆ ಊರನ್ನು ಡಾವರಗಾವ ಎನ್ನುತ್ತಾರೆ. ಇದು ಸುದೀರ್ಘ ಕಾಲದಲ್ಲಿ ಊಂಟಾದ ಬದಲಾವಣೆ. 
  ಕರ್ನಾಟಕದ ಗಡಿಯುದ್ದಕ್ಕೂ ನಿಮಗೆ ಕಾಣಸಿಗುವ ಮರಾಠ ಬಹುಸಂಖ್ಯಾತರ ಊರುಗಳು ಪೇಶ್ವೆಗಳ ಆಳ್ವಿಕೆ ಕಾಲದಲ್ಲಿ ಉಗಮವಾಗಿರುವಂತಹುಗಳು. ನಮ್ಮ ಕನ್ನಡದ ಖ್ಯಾತ ಸಂಶೋಧಕರಾದ ಎಮ್‌ ಎಮ್‌ ಕಲಬುರ್ಗಿಯವರು ಪುಣೆ ನಗರದ ಸ್ಥಳನಾಮದ ಕುರಿತು ಶೋಧನೆ ಮಾಡಿ, ಪುಣೆ ನಗರವು ಒಬ್ಬ ಕನ್ನಡಿಗನಿಂದ ಸ್ಥಾಪನೆಯಾಗಿದ್ದು ಎಂದು ಹೇಳುತ್ತಾರೆ. ಇನ್ನೂ ಮರಾಠ ನಾಯಕನಾಗಿರುವ ಶಿವಾಜಿಯ ಹುಟ್ಟೂರು ಶಿವನೇರಿ ಎಂಬುದು ಮೂಲತಃ ಕನ್ನಡ ಪದ, ಕೇರಿ ಅಥವಾ ಏರಿ ಎಂಬುದು ಕನ್ನಡದಲ್ಲಿ ತುಂಬಾ ಸ್ವಾಭಾವಿಕವಾಗಿರುವ ಹೆಸರು. ಅಂತ್ಯದಲಿ ಬರುವ ಈ ಕಾರವೂ ಸಹ ಇದನ್ನೆ ಸೂಚಿಸುತ್ತೆ. ಅಲ್ಲದೆ ನಿಮಗೆ ಕರ್ನಾಟಕದ ಶರಣ ಚಳುವಳಿಗೆ ಸಂಬಂದಿಸಿದ ಸೊಲ್ಲಾಪುರದ ಬಗ್ಗೆ ಮಾಹಿತಿ ಇರಬಹುದು. ಇದರ ಮೂಲ ಹೆಸರು ಸೊನ್ನಲಿಗೆಯಾಗಿತ್ತು ಎಂದು ವಚನ ಸಾಹಿತ್ಯದ ಮೂಲಕ ತಿಳಿದುಬರುತ್ತದೆ. 
  
    ಮಹಾರಾಷ್ಟ್ರದಲ್ಲಿಯ ಸುಮಾರು ಅರ್ಧಕ್ಕಿಂತ ಹೆಚ್ಚು ಊರ ಹೆಸರುಗಳು ಕನ್ನಡದವಿರುತ್ತವೆಂದು ಮಹಾರಾಷ್ಟ್ರದ ಪ್ರಸಿದ್ಧ ಇತಿಹಾಸ ಸಂಶೋಧಕರಾದ ಶ್ರೀ ರಾಜವಾಡೆಯವರು ಒಪ್ಪಿಕೊಂಡಿದ್ದಾರೆ. ಇಂದಿಗೂ ಅಕ್ಕಲಕೋಟೆ, ಜತ್ತ, ಸಾಂಗ್ಲಿ, ಮೀರಜ್‌ ಮುಂತಾದ ಊರುಗಳಲ್ಲಿ ಕನ್ನಡ ಮಾತನಾಡುವ ಜನ ಸಾಕಷ್ಟಿದ್ದಾರೆ. ಆತ್ಮೀಯ ಓದುಗರೆ ಕನ್ನಡ ಒಂದೋಮ್ಮೆ ಸಂಪೂರ್ಣ ದಕ್ಷಿಣ ಭಾರತವನ್ನು ಆವರಿಸಿತ್ತು, ಕಾವೇರಿಯಿಂದಾ ಗೋದಾವರಿವರೆಗೆ ಕನ್ನಡ ನಾಡು ನಿಜಕ್ಕೂ ಪಸರಿಸಿತ್ತು. ಇದಕ್ಕೆ ಇತ್ತಿಚಿನ ಪ್ರಾಕ್ತನ ಇಲಾಖೆಯ ಸಂಶೋಧನೆಗಳು ಪುಷ್ಟಿಕರಿಸುತ್ತವೆ. 

  ಕೆಲದಿನಗಳ ಹಿಂದೆ, ತೆಲಂಗಾಣದ ಹೈದ್ರಾಬಾದ ನಗರದ ಸಮೀಪ ಇರುವ ಯೆನಕಿಪಲ್ಲಿ ಎಂಬಲ್ಲಿ ಕಲ್ಯಾಣ ಚಾಳುಕ್ಯರಿಗೆ ಸಂಬಂದಿಸಿದ ಶಾಸನ ಮತ್ತು ಜೈನ ಬಸದಿಗಳೂ ಸಿಕ್ಕಿವೆ. ಇದು ಕಲ್ಯಾಣ ಚಾಳುಕ್ಯರ ದೊರೆಯಾದ ಸೋಮೇಶ್ವರನಿಗೆ ಸಂಬಂದ ಪಟ್ಟಿದ್ದು. ಅಲ್ಲದೆ ಅದೆ ಕಲ್ಯಾಣ ಚಾಳುಕ್ಯರ ದೊರೆಗಳಲ್ಲಿ ಒಬ್ಬನಾದ ಜಗದೇಕಮಲ್ಲ ಜಯಸಿಂಹ ಎನ್ನುವ ರಾಜನು ತೆಲಂಗಾಣದ ಪೊಟ್ಟಲಕೆರೆಯನ್ನು ಕೆಲ ಕಾಲ ರಾಜಧಾನಿಯಾಗಿ ಮಾಡಿಕೊಂಡಿದ್ದ ಎನ್ನುವ ಸ್ಪಷ್ಟ ಮಾಹಿತಿ ಇದೆ. ಅದೆ ಪೊಟ್ಟಲಕೆರೆ ಈಗ ಪಠಾಣಚೂರು ಎಂದಾಗಿದೆ. 

  ಮಧ್ಯ ಪ್ರದೇಶದಲ್ಲಿ ಕನ್ನಡಿಗನ ಕೀರ್ತಿ....
    ಹೀಗೆ ಕನ್ನಡನಾಡು ಒಂದು ಕಾಲದಲ್ಲಿ ವ್ಯಾಪಕವಾಗಿ ಇಡಿ ದಕ್ಷಿಣ ಭಾರತದಾತ್ಯಂತ ಹರಡಿಕೊಂಡಿತ್ತು. ಬರಿ ದಕ್ಷಿಣ ಭಾರತವಲ್ಲ, ಮದ್ಯಪ್ರದೇಶದವರೆಗೂ ನಮ್ಮ ಕನ್ನಡಿಗರ ಆಳ್ವಿಕೆ ಇತ್ತು. ಮಧ್ಯಪ್ರದೇಶದ ರಾಜಧಾನಿ ಭೂಪಾಲ ಸಮೀಪದ ಜೂರಾ ಎಂಬಲ್ಲಿ ಕನ್ನಡಿಗರು, ಕನ್ನಡದ ರಾಜನ ಗುಣಸ್ವಭಾವವನ್ನು ವರ್ಣೀಸುವ ಒಂಧು ಶಾಸನ ಸಿಕ್ಕಿದೆ, ಕನ್ನಡಿಗರ ನೈತಿಕತೆಯನ್ನು ಸಾರುವ ಈ ಶಾಸನದಲ್ಲಿ ಕನ್ನಡಿಗರನ್ನು ಇಲ್ಲಿನ ದೊರೆಯನ್ನು ಪರಾಂಗನಾ ಪುತ್ರ ಎಂದು ವರ್ಣೀಸಲಾಗಿದೆ


ಚಕ್ರವರ್ತಿ ಮೂರನೆ ಕೃಷ್ಣ ನ ಜೂರಾ ಶಾಸನ-ಕೃಪೆ ಅಂತರ್ಜಾಲ

ಸೋಲದೆ ಪರವನಿತೆಗೆ ಕಣ್
ಸೋಲದು ಮೊಲೆವಾಲನೂಡಿ ನಡಪಿದ ತಾಯಿಂ
ಮೇಲೆನೆ ಬಗೆಗುಂ ನೋಡಿರೆ
ಸೋಲದು ಚಿತ್ತಂ ಪರಾಂಗನಾಪುತ್ರಕನಾ

ಅವನು ಪರಸ್ತ್ರೀಗೆ ಸೋಲುವವನಲ್ಲ. ಅವರನ್ನು ನೋಡಿದರೆ ಮೊಲೆಹಾಲನ್ನು ಕುಡಿಸಿ ಬದುಕು ನೀಡಿದ ತಾಯಿಯಂತೆ ಗೌರವಿಸುತ್ತಿದ್ದ. ಎಂತಹ ಪರಿಸ್ಥಿತಿಯಲ್ಲೂ ಪರಸ್ತ್ರೀಗೆ ಆತನ ಚಿತ್ತ ಸೋಲುತ್ತಿರಲಿಲ್ಲ......! 

ಇನ್ನೊಂದು ಪದ್ಯದಲ್ಲಿ -

ನೋಡಿರೆ ಪರವಧುಗೆ ಮನಂ
ಕೂಡದು ಸೂೞ್ಸೂೞೊಳೆತ್ತಿ ನಡಪಿದ ತೋಳು
ಣ್ಡಾಡಿದ ಮೊಲೆ ಬಸಿಱೊಳಗಿ
ೞ್ದಾಡಿದ ಚಿತ್ತಂ ಪರಾಂಗನಾಪುತ್ರಕನಾ
    
   ಈ ಪ್ರಶಸ್ತಿ ಶಾಸನವು ಕನ್ನಡದ ಇತಿಹಾಸದಲ್ಲಿಯೆ ಅತ್ಯಂತ ಬೃಹತ್‌ ಸಾಮ್ರಾಜ್ಯವನ್ನು ಕಟ್ಟಿದ ರಾಷ್ಟ್ರಕೂಟರ ಪ್ರಖ್ಯಾತ ದೊರೆಯಾದ ಮುಮ್ಮಡಿ ಕೃಷ್ಣನ ಬಗ್ಗೆ ಬರೆದಿರುವಂತಹದು. ಶಾಸನವಂತೂ ಕನ್ನಡದಲ್ಲೆ ಇದೆ. ಆದರೆ ಇದು ಸಿಕ್ಕಿರುವ ಸ್ಥಳವನ್ನು ಗಮನಿಸಿದರೆ ಆಗ ಅಸ್ತಿತ್ವದಲ್ಲಿದ್ದ ವಿಶಾಲ ಕರ್ನಾಟಕದ ಬಗ್ಗೆ ಸ್ವಲ್ಪ ಕಲ್ಪನೆಯೂ ಮೂಡದೆ ಇರದು.

. ಇಂತಹ ವಿಶಾಲ ಕರ್ನಾಟಕವು ಯಾವ ಕಾರಣಗಳಿಗೆ ಹೀಗೆ ಕ್ಷೀಣವಾಗುತ್ತಾ ಬಂದಿತು  ಎಂಬುವುದನನ್ನು ನಿಮಗೆ ತಿಳಿಯುವ ಆಸಕ್ತಿಯಿದ್ದರೆ ಈ ಕೆಳಗೆ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ,  

ಮಹಾರಾಷ್ಟ್ರದ ಮಧ್ಯದಲ್ಲಿ ಕನ್ನಡದ ಊರು.....
   ಇಲ್ಲಿಯವರೆಗೂ ಈ ಲೇಖನವನು ಓದಿರುವ ನಿಮಗೆ ನೈಜ ಜ್ಞಾನದಾಹವಿದೆ.. ಅದಕ್ಕೆ ಪೂರಕವಾಗಿ ನಮ್ಮ ಕಡೆಯಿಂದ ನಿಮಗೆ ಒಂದು ಹೆಚ್ಚುವರಿ ಮಾಹಿತಿಯ ಅಂಶ, ನಿಮಗೆ ವಿಶ್ವಪ್ರಸಿದ್ದ ಎಲ್ಲೋರಾದ ಕೈಲಾಸನಾಥ ದೇವಾಲಯ ಗೊತ್ತಿದ್ದಿರಬಹುದು. ಈ ಎಲೋರಾ ದೇವಾಲಯ ನಿರ್ಮಾಣ ಮಾಡಿದವರು ನಾವೆ ಕನ್ನಡಿಗರು. ಈ ದೇವಾಲಯದಿಂದ ಕೆಲವೊಂದಿಷ್ಟು ಕಿ.ಮಿ ದೂರದಲ್ಲಿ ಒಂದು ಊರು ಇದೆ. ಹಿಂದೆ ಇದ್ದಿದ್ದ ಊರು ಈಗ ನಗರವಾಗಿ ಬೆಳೆದು ಅಲ್ಲಿನ ತಾಲೂಕು ಕೇಂದ್ರವಾಗಿದೆ. ಆ ಊರಿನ ಹೆಸರು ಕನ್ನಡ, ಆಶ್ಚರ್ಯ ಅದ್ರೂ ಇದೆ ನಿಜ. ನೀವು ನಂಬಲೆ ಬೇಕು. ಈ ಊರು ಔರಂಗಾಬಾದ್‌ ಜಿಲ್ಲೆ ಅಂದ್ರೆ ಈಗಿನ ಛತ್ರಪತಿ ಸಂಭಾಜಿನಗರದಿಂದ ಕೇವಲ ಮೂವತ್ತು ಕಿ.ಮಿ ದೂರದಲ್ಲಿದೆ. ಇದೂ ಅಲ್ಲದೆ, ನರ್ಮದಾ ನದಿ ತೀರದಲ್ಲಿ ಕನ್ನಡಗಾಂವ, ಕನ್ನಡಪುರ ಎನ್ನುವ ಊರುಗಳು ಇವೆ, ಈ ಭಾಗದಲ್ಲಿ ಮಾತನಾಡುವ ಜನರ ಭಾಷೆಯಲ್ಲಿ ಹೇರಳವಾಗಿ ಕನ್ನಡ ಪದಗಳು ಇವೆ, ವಿಚಿತ್ರ ಎಂದರೆ ಇವರ ಕನ್ನಡ ಹಳಗನ್ನಡವನ್ನು ಹೋಲುತ್ತದೆ. ಭಾಷಾ ತಜ್ಞರುಗಳು ಈ ಭಾಷೆಯನ್ನು ಕನ್ನಡದೆ ಉಪಭಾಷೆಯಾದ ಹೋಲಿಯಾ ಅಥವಾ ಗೋಲ್ಲಾರ ಎಂಬ ಭಾಷೆಯಿದೆ ಎಂದು ಹೇಳುತ್ತಾರೆ. ಕೆಲವು ವಿದ್ವಾಂಸರು ಇವರು ಪುಲಕೇಸಿ ಸೈನ್ಯದ ಸೈನಿಕರು, ಹರ್ಷನೊಂದಿಗಿನ ಯುದ್ದದಲ್ಲಿ ಗೆದ್ದ ಬಳಿಕ ಪುಲಿಕೇಶಿ ತನ್ನ ಸೈನಿಕರನ್ನು ಅಲ್ಲಿಯೆ ನೆಲೆ ನಿಲ್ಲಲು ಹೇಳಿದ ಎಂದು ಹೇಳುತ್ತಾರೆ. ಅದರೆ ಇತಿಹಾಸ ಮಾತ್ರ, ಇವರು ಗುಜರಾತ್‌ ಪ್ರಾಂತ್ಯವನ್ನು ಆಳುತ್ತಿದ್ದ ರಾಷ್ಟ್ರಕೂಟ ಶಾಖೆಯ ಜನರು ಎನ್ನುತ್ತಾರೆ. 

      ಸಾಧ್ಯ ಸಾಧ್ಯತೆಗಳು ಏನೆ ಇದ್ರೂ, ಒಂದು ಕಾಲದಲ್ಲಿ ಕನ್ನಡವು ಸಂಪೂರ್ಣ ದಕ್ಷಿಣ ಭಾರತವನ್ನು ವ್ಯಾಪಿಸಿತ್ತು ಎಂಬುದಂತೂ ಬಲು ಸ್ಪಷ್ಟ. ಪುಲಕೇಶಿ ಕಾಲಕ್ಕೆ ನರ್ಮದೆ ನದಿಯವರೆಗೆ ಇದ್ದ ಕನ್ನಡನಾಡು, ಕುಗ್ಗಿ, ಗೋದಾವರಿವರೆಗೆ ಬಂದಿತು, ನಂತರ ಅದೂ ಕುಗ್ಗಿ ಈಗ ಮಾಂಜರಾ ಅಂದರೆ ಗೋದಾವರಿಯ ಉಪನದಿಯ ಹತ್ತಿರ ಬಂದಿದೆ. ಕನ್ನಡದ ಈ ಪ್ರಮಾಣದ ಕುಸಿತಕ್ಕೆ ಕಾರಣಗಳೇನು ಎನ್ನುವುದನ್ನು ಮುಂದಿನ ಲೇಖನದಲ್ಲಿ ನೋಡೋಣ…. ಆತ್ಮೀಯ ಓದುಗರೆ ನಾವು ಈಗಲೂ ಎಚ್ಚೆತ್ತು ಕೊಳ್ಳದೆ ಇದ್ದರೆ ನಾವು ಖಂಡಿತ ನಮ್ಮ ಕನ್ನಡ ನಾಡನ್ನು ಕಳೆದುಕೋಳ್ಳುತ್ತೆವೆ. ಬೆಳಗಾವಿ ಕೇಳುತ್ತಿರುವ ಅವರು ನಾಳೆ, ಇಲ್ಲಿ ನಮ್ಮ ಪದಪಾದಶಾಹ ಆಳ್ವಿಕೆ ನಡೆಸಿದ್ದಾನೆ. ಹೀಗಾಗಿ ಬೆಂಗಳೂರನ್ನು ಸಹ ನಮಗೆ ಕೊಟ್ಟು ಬಿಡಿ ಎಂದು ಕೇಳಬಹುದು… ಅಂತವರಿಗೆ ಈ ಲೇಖನವನ್ನು ತೋರಿಸಿ, ನಿಮ್ಮ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಿ. ಮುಂದೆ ಮತ್ತೆ ಇಂತಹ ಲೇಖನದಲ್ಲಿ ನಿಮಗೆ ಭೇಟಿಯಾಗುತ್ತೆನೆ. ಅಲ್ಲಿಯವರೆಗೂ ಸುಖವಾಗಿರಿ, ಸಮೃದ್ದವಾಗಿರಿ.

 ಧನ್ಯವಾದಗಳು.

ಕಾಮೆಂಟ್‌ಗಳು

  1. ಕನ್ನಡ ನಾಡಿನ ಭಾಷೆ,ಕಲೆ, ಹಾಗೂ ವೈವಿಧ್ಯತೆ ಮತ್ತು ಪ್ರಾಚಿನತೆಯ ಕುರುಹುಗಳು ಕುರಿತು ಉತ್ತಮ ಸಂಶೋಧನಾತ್ಮಕ ಲೇಖನವಾಗಿದೆ ಸರ್ ... ಕನ್ನಡ ನಾಡಿನ ನೈಜ ಇತಿಹಾಸದ ಅರಿವು ಕುರಿತು ತಮ್ಮ ಸಂಶೋಧನೆ ಹೀಗೆ ಮುಂದುವರೆಯಲಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ