ವಿಕೇಂದ್ರಿಕರಣ ಮತ್ತು ಪ್ರಬಲ ಪ್ರಜಾಪ್ರಭುತ್ವ
ಈ ಸಂವಿಧಾನವು ನಮ್ಮ ದೇಶದ ಎಲ್ಲ ವಿಧದ ಆಡಳಿತ ಹಾಗೂ ಕ್ಷಮತೆಗೆ ಸಹಾಯಕವಾಗಿದೆ. ಇದರ ಅನೇಕಾನೇಕ ಲಕ್ಷಣಗಳಲ್ಲಿ ನಾನು ಒಂದು ವಿಷಯ ಇಲ್ಲಿ ಚರ್ಚಿಸಲು ಯತ್ನಿಸುತ್ತೆನೆ. ಅದೆಂದರೆ ಅಧಿಕಾರದ ವಿಕೇಂದ್ರೀಕೃತ ಆಡಳಿತದ ಮಾದರಿ.
ನಮ್ಮ ಭಾರತ ಬಹು ವೈವಿಧ್ಯಮಯವಾದ ದೇಶ. ಇಲ್ಲಿ ನೀವು ಎಲ್ಲಾ ಪ್ರಮುಖ ಧರ್ಮಗಳು, ಇಲ್ಲೆ ಉಗಮಿಸಿದ ಮತ ಪಂಥಗಳು ಮನುಕುಲದ ಅತ್ಯಂತ ಪುರಾತನ ಆಚರಣೆಗಳು, ನಭಕ್ಕೇರಿದ ವೈಜ್ಞಾನಿಕ ಸಾಧನೆಗಳು ಎಲ್ಲವನ್ನೂ ನೀವು ಇಲ್ಲಿ ನೋಡಬಹುದು.
ಅದಾಗ್ಯೂ ಈ ದೇಶದ ಅಭ್ಯುದಯಕ್ಕೆ ಪರಮ ಕಾರಣವಾಗಿರುವ ಅಂಶಗಳಲ್ಲಿ ಸಂವಿಧಾನವೆ ಮೊದಲು ನಿಲ್ಲುತ್ತದೆ. ಇದರ ಅಧಿಕಾರದ ವಿಕೇಂದ್ರೀಕರಣ ತತ್ವ ಪ್ರಾಯಶಃ ನಮ್ಮ ದೇಶ ಸುಸ್ಥಿರವಾಗಿರಲು ಕಾರಣವಾಗಿದೆ ಎಂಬುದು ಸಾರ್ವತ್ರಿಕ ಅಭಿಪ್ರಾಯ.
ಸಂವಿಧಾನದಲ್ಲಿ ಮೂಡಿದ ಈ ಅಧಿಕಾರ ವಿಕೇಂದ್ರೀಕರಣ ಬರಿ ದೇಶಕ್ಕೆ ಮಾತ್ರವಲ್ಲದೆ, ಜನರ ಸೇವೆಗಾಗಿ ಸ್ಥಾಪಿಸಿದ ಯಾವುದೇ ಸಂಸ್ಥೆಗೆ ಅನ್ವಯಿಸುತ್ತದೆ. ವಿಕೇಂದ್ರೀಕರಣ ಜನರ ಆಶೋತ್ತರಗಳನ್ನು ಈಡೆಸರಿಸಲು ಆಯಾ ಹಂತಗಳಲ್ಲೆ ಸಹಾಯಕವಾಗುತ್ತದೆ. ಇಲ್ಲವಾದಲ್ಲಿ ಅಧಿಕಾರಶಾಹಿಯು ತನ್ನ ಧ್ಯೇಯೋದ್ದೇಶವನ್ನು ಮರೆತು ಸ್ವಾರ್ಥ ಸಾಧನೆಯಲ್ಲಿ ಮುಳುಗಲು ಪ್ರಾರಂಭಿಸುತ್ತದೆ.
ಇದು ಆರಂಭವಾದಲ್ಲಿ ಸಂಸ್ಥೆಯ ಅಧ: ಪತನ ಪ್ರಾರಂಭವಾದಂತೆಯೆ.
ಹಾಗೆ ಸರ್ಕಾರದ ಕೆಲವು ಇಲಾಖೆಗಳು ಜನಪರವಾಗಿ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಅತ್ಯಂತ ದಕ್ಷ ಅಧಿಕಾರಿಗಳಿಂದ ನಿಯಂತ್ರಿತಗೊಂಡ ಈ ಇಲಾಖೆಗಳಲ್ಲಿ ಅಧಿಕಾರಿಗಳು ಸೇವೆ ಸಲ್ಲಿಸುತ್ತಾರೆ. ಆದರೆ ಆ ಹುದ್ದೆಗೂ ಯಾವ ವಿಧದಲ್ಲಿ ಸಹ ಸಂಬಂಧವಿಲ್ಲದ ವ್ಯಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಅಂತಹ ಉತ್ತಮ ವ್ಯಕ್ತಿತ್ವ ಅಧಿಕಾರಿಗಳಿಗೆ ಬಲಿ ಕೊಡಲು ಕೂಡ ಹಿಂದೆ ಮುಂದೆ ನೋಡುವುದಿಲ್ಲ. ಇದರ ನೇರ ಪರಿಣಾಮ ಆಗುವುದು ಜನರ ಮೇಲೆಯೆ. ಇನ್ನೂ ಕೆಲವು ಇಲಾಖೆಗಳ ಅಂಗಸಂಸ್ಥೆಗಳ ಅಡಿಯಲ್ಲಿ ಕೆಲಸ ಮಾಡುವ ಕೆಳ ಹುದ್ದೆಯ ವ್ಯಕ್ತಿಗಳು ಆ ಇಡಿ ಸಂಸ್ಥೆ ತಮ್ಮದೆ ಸ್ವಂತ ಆಸ್ತಿಯಂತೆ ಅದರ ಸಂಪನ್ಮೂಲಗಳನ್ನು ಬಳಸುತ್ತಿರುವುದು, ಅಧಿಕಾರ ವ್ಯಾಪ್ತಿ ಮೀರಿ ಆಡಳಿತದಲ್ಲಿ ಮೂಗು ತೂರಿಸುವದರಿಂದ ಗುಣಮಟ್ಟದ ಆಡಳಿತ ನೀಡಲು ಅಧಿಕಾರಿಗಳಿಗೆ ಸಮಸ್ಯೆಯಾಗುವುದು ಖಚಿತ. ಇದು ಇಡಿ ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟು ಮಾಡುವಂತಹದು.
ಹೀಗೆ ವಿಕೇಂದ್ರೀಕರಣ ಭವ್ಯ ಭಾರತದ ಪ್ರಜಾಪ್ರಭುತ್ವವನ್ನು ನಿರಂತರವಾಗಿಡಲು ಮೂಲದಲ್ಲೆ ಸಹಾಯಕವಾಗಿದೆ. ಇಲ್ಲವಾದಲ್ಲಿ ಸರ್ವಾಧಿಕಾರದ ಮನಸ್ಸಿನ ವ್ಯಕ್ತಿಗಳು ಈ ಭಾರತವನ್ನು ಎಂದೊ ತಮ್ಮ ಅಂಕಿತಕ್ಕೆ ಒಳಪಡಿಸಿಕೊಂಡು ದುರ್ಮದರಾಗಿ ಮುಂದುವರೆಯುತ್ತಿದ್ದರು ಎನ್ನುವುದನ್ನು ಇಲ್ಲಿ ಮನಗಾಣಬಹುದು.
( ವಿ.ಸೂ: ಈ ಲೇಖನ ಕೇವಲ "ಶೈಕ್ಷಣಿಕ ಉದ್ದೇಶ" ಕ್ಕಾಗಿ ಮಾತ್ರ ಬರೆದಿರುವಂತಹದು, ಓದುಗರಿಗೆ ಇದರಿಂದ ಸಮಸ್ಯೆಯಾದಲ್ಲಿ ಲೇಖಕರು ಸರ್ವಥಾ ಕಾರಣರಲ್ಲ ಎಂದು ಬಹು ಸ್ಪಷ್ಟವಾಗಿ ಹೇಳಿದೆ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ