ಸ್ಥಿತಪ್ರಜ್ಞ ಪೌರವ ಪುರುಷ

ಎಲ್ಲವೂ ಚನ್ನಾಗಿ ನಡೆಯುತ್ತಿರುವಾಗ ಬದುಕು ಸುಂದರ, ಸುಮಧುರವಾಗಿ ಕಂಡುಬರುತ್ತದೆ. ಪ್ರತಿಯೊಬ್ಬ ಪುರುಷ ಅಥವಾ ಸ್ತ್ರೀ ಅಂತಹ ಸಂಧರ್ಭಗಳಲ್ಲಿ ಆನಂದದಿಂದ ಇರುತ್ತಾರೆ. ಜೀವನದ ಪ್ರತಿಯೊಂದು ವಿಷಯ ಅವರಿಗೆ ಹಿತ ನೀಡುತ್ತವೆ. ಆದರೆ......., 
 ಒಂದು ದಿನ ಇದ್ದಕ್ಕಿದ್ದಂತೆ ಆ ಕನಸಿನಂತಿರುವ ಜೀವನ ಪಾತಾಳಕ್ಕೆಸೆಯಲ್ಪಡುತ್ತದೆ. ಪಾರ್ಕು, ರೆಸ್ಟೋರೆಂಟ್ ಗಳಲ್ಲಿ ನಲಿಯುತ್ತಿದ್ದ ಮುಖಕ್ಕೆ ಆಸ್ಪತ್ರೆಯ ರೌರವ ನರಕದ ದರ್ಶನವಾಗುತ್ತದೆ, ಹಾಯಾಗಿ ಮೆತ್ತನೆಯ ಹಾಸಿಗೆಯ ಮೇಲೆ ಮಲಗುತ್ತಿದ್ದವರು ಆಸ್ಪತ್ರೆಯ ಅಂಗಳದಲ್ಲಿ ರಾತ್ರಿಯಾಗುತ್ತಿದ್ದಂತೆ ಜಾಗ ಹಿಡಿಯಬೇಕಾಗುತ್ತದೆ. ICU ನಲ್ಲಿರುವ ಸಂಬಂಧಿಕ ರೋಗಿ ತನ್ನ ಪಾಡಿಗೆ ತಾನಿರುತ್ತದೆ. ಆದರೆ ಆ ರೋಗಿ ಜೊತೆಗೆ ಹೋದ ಕರುಳ ಬಳ್ಳಿ ಮಾತ್ರ ಕಟುಕನು ಎಳೆದುಕೊಂಡ ಹೋದ ಆಕಳ ಕರುವಿನಂತೆ ವಿಲ ವಿಲ ಒದ್ದಾಡುತ್ತಿರುತ್ತದೆ. 
ಆದರೆ ಕೆಲವೊಬ್ಬರಿಗೆ ಸ್ಥಿತಪ್ರಜ್ಞೆಯೆ ಆಧಾರವಾಗಿರುತ್ತದೆ. ಭಾವನಾರಹಿತರಾಗಿ ಕಲ್ಲಿನಂತೆ ಇದ್ದುಬಿಡುವುದೆ? ಅಥವಾ ಆಸ್ಪತ್ರೆಯ ಭೀಕರತೆಯ ಒಂಟಿತನದಲಿ ಸಾಂಗತ್ಯಕ್ಕಾಗಿ ಹಂಬಲಿಸುವುದಾ??
ಸ್ಥಿತಪ್ರಜ್ಞೆನಾದವನು ಇವೆರಡರಲ್ಲಿ ಯಾವುದನ್ನೂ ಮಾಡುವುದಿಲ್ಲ. ಕಠಿಣಾತಿ ಕಠಿಣ ಪರಿಸ್ಥಿತಿಯಲ್ಲಿ ಸಹ ಸ್ಥಿತಪ್ರಜ್ಞೆನು ಪೌರವನಂತೆ ಇರುತ್ತಾನೆ.
ಹೀಗಿವೆ ಸ್ಥಿತಪ್ರಜ್ಞನ ಮೂಲ ಗುಣಗಳು :-

೧.ನಂಜುಂಡನಾಗಿರುವದು:-
ಅರೆ ಇದೆನಿದು, ನಂಜಂಡ ಅಂದ್ರೆ ಶಿವನಲ್ವಾ?? ಹೌದು. ಶಿವನು ವಿಷವನ್ನು ನುಂಗಿ ಪ್ರಪಂಚವನ್ನು ರಕ್ಷಿಸಿದ ಹಾಗೆಯೆ, ಎದುರಾದ ಸನ್ನಿವೇಶವನ್ನು ಗಾಂಭಿರ್ಯದಿಂದ ಎದುರಿಸಿ ನುಂಗಿ ಬಿಡಬೇಕು. ಈ ಮನಸ್ಥಿತಿ ನಮ್ಮನ್ನು ಭಾವೋದ್ರೇಕದಿಂದ ರಕ್ಷಿಸುವುದಲ್ಲದೆ, ನಾವು ಮಾಡುವ ತೀರ್ಮಾನ ಗಳಲ್ಲಿ ನಿರ್ಲಿಪ್ತತೆಯನ್ನು ಹೊರಹಾಕುತ್ತದೆ. ಮನುಷ್ಯನಿಗೆ ಜೀವನವೂ ಅನಿರೀಕ್ಷಿತಗಳ ಸಂತೆ. ಅವುಗಳನ್ನು ಎದುರಿಸುವ ಏಕೈಕ ಮಾರ್ಗ ಇದು.ಸ್ಥಿತಪ್ರಜ್ಞ ಪುರುಷನ ಮೊದಲ ಗುಣ ಇದು.

೨.ಮಾನಸಿಕವಾಗಿ ಬಲಿಷ್ಠನಾಗಿರುವದು:-
ಪೌರವ ಪುರುಷ ತನ್ನ ಸುತ್ತಲೂ ನಡೆಯುತ್ತಿರುವ ಘಟನೆಗಳಿಂದ ಮಾನಸಿಕವಾಗಿ ವಿಚಲಿತನಾಗುವುದಿಲ್ಲ. ಹಾಂ ಒಮ್ಮೊಮ್ಮೆ ತೀರಾ ಸೂಕ್ಷ್ಮ ಸಂಧರ್ಭಗಳಲ್ಲಿ ಮೂಡುವ ಭಾವನೆಗಳಿಗೆ ಕಣ್ಣಿರು ಜಿನುಗಬಹುದು.ಆದರೆ ಅದು ಆತನ ಮಾನಸಿಕ ದೃಡತೆಯನ್ನು ಅಲುಗಾಡಿಸದು. ಶ್ರೀ ಕೃಷ್ಣನಂತೆ ಎಲ್ಲವನ್ನೂ ಸ್ವೀಕರಿಸುವ ಮಾನಸಿಕ ಸಾಮರ್ಥ್ಯ ಪೌರವ ಪುರುಷ ಹೊಂದಿರುತ್ತಾನೆ.
ಏಕೆಂದರೆ ಮನಸ್ಸು ವಿಚಲಿತವಾದರೆ ಬದುಕು ಸಹ ಹಳಿ ತಪ್ಪುವದನ್ನು ಅನುಭವದಿಂದಾದರು ಆತ ಕಲಿತಿರುತ್ತಾನೆ.

೩.ನಿರ್ಲಿಪ್ತತೆಯ ಮೂಲದ ವ್ಯಕ್ತಿ :-

"ಶ್ರೇಷ್ಠತೆಯನ್ನು ಸಾಧಿಸುವ ದಾರಿಯಲ್ಲಿ ನಿರ್ಲಿಪ್ತ ಮನಸ್ಸು ಮೊದಲ ಮೆಟ್ಟಿಲು"
-ಶ್ರೀ ಅರಬಿಂದೂ

ನಿರ್ಲಿಪ್ತತೆ ಎಂದರೆ ಭಾವನೆಗಳನ್ನು ವ್ಯಕ್ತಪಡಿಸದೆ ಇರುವುದು.ಸುಖ ಬಂದಾಗ ಹಿಗ್ಗುವುದಾಗಲಿ, ದುಃಖ ಬಂದಾಗ ಕುಗ್ಗುವುದಾಗಲಿ ಅಲ್ಲವೆ ಅಲ್ಲ. ಪುರುಷನ ಗಾಂಭಿರ್ಯದಲ್ಲಿ ಇದರ ಪಾತ್ರ ಮುಖ್ಯ. ಅದರಲ್ಲೂ ಕೇಂದ್ರ ಬಿಂದುವಿನ ಸ್ಥಾನದಲ್ಲಿರುವ ಪುರುಷ ಪೌರವನಂತೆ ನಿರ್ಲಿಪ್ತನಾಗಿರುತ್ತಾನೆ. ಏಕೆಂದರೆ ತನ್ನ ಕರ್ತವ್ಯವನ್ನು ಶಕ್ತಿಮೀರಿ ಮಾಡಿದ್ಯಾಗೂ ಸಹ ಪ್ರತಫಲ ವ್ಯತಿರಿಕ್ತವಾದರೆ ಯಾರು ತಾನೆ ಏನು ಮಾಡಲು ಸಾಧ್ಯ. ತನ್ನ ಕೆಲಸ ಕಾರ್ಯಸಾಧನೆಯಲ್ಲಿ ಪೂರ್ಣಮನಸ್ಸಿನಿಂದ ತೊಡಗಿಸಿಕೊಂಡಿದ್ಯಾಗೂ ಕೆಲಸ ವಿಫಲವಾದರೆ ಅಥವಾ ಸಾಧಸಿದರೆ ಆತ ನಿರ್ಲಿಪ್ತನಂತೆ ಇರುತ್ತಾನೆ. ವಸ್ತು, ವ್ಯಕ್ತಿಗಳೋಂದಿಗಿನ ನಿರ್ಲಿಪ್ತತೆ ನಮ್ಮನ್ನು ಸುಡುವ ಮಾನಸಿಕ ತಾಪದಿಂದ ರಕ್ಷಿಸುತ್ತದೆ.

೪.ಹಳೆಯ ಸುಂದರ ನೆನಪುಗಳನ್ನು ಜೀವಿಸುವುದು:-
ಜೀವನದ ಕಠಿಣ ಪರಿಸ್ಥಿತಿಯಲ್ಲಿ ಇದ್ದಾಗ ಮನಸ್ಸಿನ ತುಂಬ ದುಗುಡ ಹಾಗೂ ಅನಿಶ್ಚಿತತೆ ತುಂಬಿಕೊಳ್ಳುತ್ತದೆ. ಅಯ್ಯೋ ಇದೆನು ಕಷ್ಟಗಳ ಮೇಲೆ ಕಷ್ಟಗಳು ನಮ್ಮನ್ನು ಹಿಂಸಿಸುತ್ತಿವೆಯಲ್ಲ  ಎಂಬ ಭಾವ ನಮ್ಮನ್ನು ಆವರಿಸುವುದಕ್ಕಿಂತ ಮೊದಲೆ, ಅಂತಹ ಮನೋಭಾವವನ್ನು ಆತ ತ್ಯಜಿಸಿ ಬಿಡುತ್ತಾನೆ‌. 
ಯಾರ ಜೀವನವೂ ತನ್ನ ಉದ್ದಕ್ಕೂ ಬರಿ ನೋವುಗಳನ್ನೆ ತುಂಬಿಕೊಂಡಿರುವುದಿಲ್ಲ. ಬಹಳಷ್ಟು ಸುಂದರ ಸುಮಧುರ ನೆನಪುಗಳು ಸಹ ಇರಬಹುದು. ಮನಸ್ಸಿನ ಹಿತಕ್ಕೊಸ್ಕರ ಅಂತಹ ನೆನಪುಗಳನ್ನು  ಜೀವಿಸಬೇಕು. ಅಂತಹ ನೆನಪುಗಳು ಆ ಕಠಿಣ ಸಂಧರ್ಭಗಳಲ್ಲಿ ನಮ್ಮ ಹೃದಯ ಮನಸ್ಸನ್ನು ರಕ್ಷಿಸುತ್ತವೆ.

೫.ಪ್ರಿಯ ವ್ಯಕ್ತಿಗಳೊಂದಿಗೆ ಮಾತುಕತೆ- ಸಮಾಲೋಚನೆ:-


ಇಲ್ಲಿ ಬಲುಮುಖ್ಯವಾದ ಅಂಶ ಇದು ಒಂದು. ಮಾನವ ಸಂಘಜೀವಿ. ಆತನ ಭಾವನೆಗಳಿಗೆ ಸ್ಪಂದಿಸುವ ಮನಸ್ಸಿಗೆ ಬಹುಬೇಗ ಸೋತುಬಿಡುತ್ತಾನೆ. ಜೀವನದಲ್ಲಿ ಆತ್ಮಹತ್ಯೆ, ಮನೆಬಿಟ್ಟು ಹೊರಟುಹೋಗುವುದು, ಗೀಳು ಮನೋರೋಗಕ್ಕೆ ತುತ್ತಾಗುವುದು ಇತ್ಯಾದಿಗಳೆಲ್ಲವೂ ತೀವ್ರತರವಾದ ಏಕಾಂತದಿಂದಲೆ ಬರುವುದು. ಏಕಾಂತವು ನಮ್ಮ ಪ್ರಜ್ಞೆಯನ್ನು ಹುರಿಗೊಳಿಸುವ ಸಾಧನವಾದರೂ,ನಮ್ಮ ಆಕಾಂಕ್ಷೆಗಳಿಗೆ ಸ್ಪಷ್ಟ ರೂಪ ಅದು ಕೊಡಬಹುದಾದರೂ ಸಹ ಆಸ್ಪತ್ರೆಯ ಕಠಿಣ ಏಕಾಂತವಾಗಲಿ, ಮಾನಸಿಕ ಕ್ಷೋಭೆಯ ದಿನಗಳಲ್ಲಾಗಲಿ ಎಳ್ಳಷ್ಟು ಒಳ್ಳೆಯದಲ್ಲ.
ಅಂತಹ ದಿನಗಳಲ್ಲಿ ನಮ್ಮ ಆತ್ಮಕ್ಕೆ ಹೃದಯಕ್ಕೆ ಹತ್ತಿರದವರಾದವರವ ಜೊತೆಗ ಸಂಭಾಷಿಸಬೇಕು. ನೋವನ್ನು ಹಂಚಿಕೊಳ್ಳುವರೊಂದಿಗೆ ಎರಡು ಮಾತಾಡಿದಾಗ ಉಂಟಾಗುವ ಅನುಭೂತಿ ಅಪೂರ್ವವಾದುದು.

(To be continued.....)
 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡಮಯ ಮಹಾರಾಷ್ಟ್ರ

ವಿಜ್ಞಾನದ ಮೂಲವೆ ಪ್ರಶ್ನೆ ಮಾಡುವ ಕುತೂಹಲಕರ ಮನಸ್ಸು...