ಹೇಮಿಯ ಗಂಡ
(ಕುವೆಂಪು ತಮ್ಮ ಮಗು ಮತ್ತು ಮಡದಿ ಹೇಮಾವತಿಯವರೊಂದಿಗೆ)
ಸುಮಾರು ದಿನಗಳಿಂದ ಮನಸ್ಸು ವಿಪ್ಲವದಲ್ಲಿ ಮುಳುಗಿತ್ತು. ಯಾವುದರಲ್ಲಿ ಸಹ ಆಸಕ್ತಿ ಇರಲಿಲ್ಲ. ಕೆಲಸ ದಣಿವು, ನಿದ್ರೆ ಇವುಗಳೆ ನನ್ನ ಸಂಗಾತಿಗಳಾಗಿಬಿಟ್ಟಿದ್ದವು.
ನನ್ನವಳ ಕಿರಿ-ಕಿರಿಯಿಂದ ನನಗೆ ಸಾಕಾಗಿತ್ತು. ಪರಸ್ಪರ ಪ್ರೇಮಿಸಿ ಮದುವೆಯಾಗಿದ್ದರು ಸಹ ನಮ್ಮಲ್ಲಿ ಸಹಸಂಗತಿಗಳು ಹೇರಳವಾಗಿ ಇರಲಿಲ್ಲ. ಅಸಹನೆ ಹೆಚ್ಚುತ್ತಿತ್ತು. ಇಬ್ಬರೂ ನೌಕರರಾಗಿದ್ದರಿಂದಲೋ, ಸಮಯದ ಅಭಾವದಿಂದಲೋ ಎನೋ ಗೊತ್ತಿಲ್ಲ.
ಇವತ್ತು ಬೆಳಿಗ್ಗೆ ಎದ್ದವನೆ ಅವನಿಗೆ ಕರೆ ಮಾಡಿದೆ.
ಅವನಿಟ್ಟಿದ್ದ ಕಾಲರ್ ಟ್ಯೂನ್ ಕೇಳಿಯೆ ಮನಸ್ಸು ಸಮಾಧಾನವಾಗಬೇಕು. ಅಂತಹ ಟ್ಯೂನ್ ಅದು. ಆತ ಕರೆ ಸ್ವೀಕರಿಸಿ ಮಾತನಾಡಿದ.
ಸಾಯಂಕಾಲ ಸಿಗುವೆಯಾ??
"ಖಂಡಿತ "
ಆ ಕಡೆಯಿಂದ ಉತ್ತರ ಬಂದಿತು.
ಅಷ್ಟೇ ಕರೆ ಮುರಿಯಿತು.
ಚನ್ನಬಸವ ಕೆರೆ, ನಾನಿರುವ ಪಟ್ಟಣದ ಬಹುತೇಕ ಬಾವಿ, ಕೊಳವೆ ಬಾವಿಗಳ ಜೀವದಾಯಿನಿ. ಇದು ಬಯಲು ಸೀಮೆಯ ಈ ಪಟ್ಟಣದಲ್ಲಿ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಿದೆ. ಇತ್ತಿಚಿಗೆ ಆ ಕೆರೆಯ ಒಡ್ಡನ್ನು ಮತ್ತಷ್ಟು ಎತ್ತರಕ್ಕೆರಿಸಿ ಅದರ ಮೇಲೆ ಡಾಂಬರು ರಸ್ತೆ ಮಾಡಿದ್ದಾರೆ. ಬೆಳಿಗ್ಗೆ ಮತ್ತು ಸಾಯಂಕಾಲ ಅಲ್ಲಿ ಜನ ವಾಯುವಿಹಾರಕ್ಕೆ ಬರುತ್ತಾರೆ.
ನಾವಿಬ್ಬರು ಆ ಕೆರೆಯ ದಿಬ್ಬದ ರಸ್ತೆ ಮೇಲೆ ಸಾಕಷ್ಟು ಬಾರಿ ಓಡಾಡಿದ್ದೆವೆ. ಅಲ್ಲಿ ಬದಲಾದದ್ದು ಎನು ಅಲ್ಲ. ಆದರೆ ನನ್ನ ಪರಿಸ್ಥಿತಿ ವಿಭಿನ್ನವಾಗಿದೆ.
ಆತ ನಿಧಾನವಾಗಿ ಹೆಜ್ಜೆಯಿಡುತ್ತಿದ್ದ. ಹಿಂದೆ ಕೈಗಳನ್ನು ಕಟ್ಟಿ, ಜೊತೆಯವರ ಮಾತುಗಳನ್ನು ಕೇಳಿಸಿಕೊಳ್ಳುತ್ತ ತಲೆಯಾಡಿಸುತ್ತ ಸಾಗುವುದು ಅವನ ರೀತಿ. ಈಗಲೂ ಹಾಗೆ ಮೌನವಾಗಿ ಚಲಿಸುತ್ತಿದ್ದ.
ಆದರೆ ನನಗೆ ಆ ಮೌನ ಅಸಹನಿಯವೆನಿಸಿತು. ಅಲ್ಲಿ ಜನರಿದ್ದರು, ಜೋಡಿಗಳು ತಮ್ಮ ತಮ್ಮಲ್ಲೆ ಗುಸು ಗುಸು ಮಾತಾನಡುತ್ತಾ ನಗುತ್ತಾ ಸಾಗುತ್ತಿದ್ದವು. ಆದರೂ ನನಗೆ ಅಲ್ಲಿ ಮೌನವೆ ಪ್ರಧಾನವಾಗಿ ಕಾಣಿಸಿತು. ಎಕೆಂದರೆ ಆತ ಮೌನವಾಗಿದ್ದ.
ನಾವು ಹಾಗೆ ನಡೆಯುತ್ತ ಕೆರೆಯ ಆಚೆ ದಂಡಗೆ ಬಂದೆವು. ಅಲ್ಲಿ ಜನರ ಓಡಾಟ ವಿರಳವಾಗಿತ್ತು. ಅಲ್ಲಿರುವ ಒಂದು ಕಲ್ಲು ನಾವು ಕುಳಿತುಕೊಳ್ಳುವ ಖಾಯಂ ಸ್ಥಳವಾಗಿಬಿಟ್ಟಿತ್ತು. ಆತ ನಾವು ಇಲ್ಲಿ ಕುಳಿತುಕೊಳ್ಳಬಹುದಲ್ಲ ಎಂದನು.
ಇರ್ವರು ಅಲ್ಲಿಯೆ ಕುಳಿತೆವು. ಮೌನ ಮತ್ತೆ ನಮ್ಮಬ್ಬರ ನಡುವೆ ಇಣುಕಿತು...
ನನಗೆ ಜೀವನ ಬೇಸರವಾಗಿದೆ ಎಂದೆ.
ಆತ ಅದನ್ನು ಕೇಳಿಸಿಕೊಳ್ಳದವನಂತೆ,
ಅಲೆಗಳನ್ನು ನೋಡಿ, ನೋಡು ಆ ಅಲೆಗಳಿಗೆ ದಣಿವೆ ಇಲ್ಲ... ಎಂದ
ಮಳೆ ಚನ್ನಾಗಿ ಆಗಿದ್ದರಿಂದ ಆ ಕೆರೆ ಭರಪೂರ ತುಂಬಿತ್ತು. ಸಹಜವಾಗಿ ಅಲೆಗಳು ದಡಕ್ಕೆ ನಿರಂತರವಾಗಿ ಅಪ್ಪಳಿಸುತ್ತಿದ್ದವು.
ಬದುಕು ಹಾಗೆ, ನಾವು ಆಂತರಿಕವಾಗಿ ತುಂಬಿದ್ದರೆ ಮಾತ್ರ, ಜೀವನವನ್ನು ಎದುರಿಸಲು ಸಾಧ್ಯ. ಇಲ್ಲದಿದ್ದರೆ ಬದುಕು ನೀರಸವೆನಿಸುತ್ತದೆ ಎಂದನು.
ಆತ ಹೇಳಿದ್ದರಲ್ಲಿ ನಿಜವಿತ್ತು. ಆದರೆ ನನಗೆ ಸಂಸಾರದಲ್ಲಿನ ಕಾಟ, ಅವಳು ಮತ್ತು ನನ್ನ ನಡುವೆ ಪುಟ್ಟ ಪುಟ್ಟ ವಿಷಯಕ್ಕೂ ಆಗುತ್ತಿದ್ದ ಜಗಳ, ನಾವು ಕಚ್ಚಾಡುವಾಗ ಬೆಪ್ಪಾಗಿ ನಿಲ್ಲುತ್ತಿದ್ದ ಮಕ್ಕಳು...
ಎಲ್ಲವೂ ಒಂದು ಕ್ಷಣ ಕಣ್ಣಮುಂದೆ ಬಂದು ಮಾಯವಾಯಿತು.
ಕೆಲವೊಂದು ವಿಷಯಗಳು ಕೇಳಲು ಮತ್ತು ಹೇಳಲು ಚನ್ನಾಗಿ ಇರುತ್ತವೆ. ಅವುಗಳನ್ನು ಅನುಭವಸಿದವನಿಗೆ ಮಾತ್ರ ಗೊತ್ತು, ಅವುಗಳ ಆಳ ಎಂದು ಗುನುಗಿದೆ.
ಆತ ಮಾತ್ರ ಅಲೆಗಳನ್ನೆ ನೋಡುತ್ತಿದ್ದ,
ಹಾಗೆಯೆ ಹೇಳಿದ, ನಿನಗೆ ಒಂದು ವಿಷಯ ಹೇಳ್ತಿನಿ ಕೇಳು....
ಕೇಳೊದಕ್ಕೆ ಬಂದಿದಿನಿ. ಆದರೆ ನನಗೆ ನಿರಾಳತೆ ಬೇಕು. ನನಗೆ ಮನೆಯಲ್ಲಿನ ದಿನನಿತ್ಯದ ಜಂಜಾಟದಿಂದ ಜೀವನ ಸಾಕಷ್ಟು ಕಿರಿ ಕಿರಿ ಅನಿಸ್ತಿದೆ ಎಂದೆ. ನನ್ನಲ್ಲಿ ಅಸಹನೆ ಮನೆ ಮಾಡಿತ್ತು. ಆದಷ್ಟು ಬೇಗ ನೆಮ್ಮದಿ ಸಿಕ್ಕರೆ ಸಾಕು ಎನ್ನುವಂತೆ ಆಗಿತ್ತು.
ಆತ ಹೇಳತೊಡಗಿದ. ಆತನ ಪ್ರತಿ ಪದಗಳು ಸ್ಪಷ್ಟವಾಗಿ ಗಂಟೆ ಬಾರಿಸಿದಂತೆ ಇರುತ್ತಿದ್ದವು,
ಕುವೆಂಪುರವರ ಜೀವನ ತುಂಬ ಮಾಧುರ್ಯದಿಂದ ಕೂಡಿತ್ತು. ಅವರ ಜೀವನದುದ್ದಕ್ಕೊ ಬೆಂಗಾವಾಲಾಗಿ ನಿಂತವರು ಅವರ ಮಡದಿ, ಹೇಮಾವತಿ.
ಹಾ, ಕೇಳಿದಿನಿ. ಅವರ ಹೆಸರು. ಅವರದು ಅಪರೂಪದ ದಾಂಪತ್ಯ.ಮುದ್ದಾದ ಮಕ್ಕಳು. ಅವರು ನಿಜಕ್ಕೊ ಬದುಕಲಿಲ್ಲ, ಬದಲಿಗೆ, ಬಾಳಿದರು.. ನಾನು ಬಡಬಡಿಸಿದೆ.
ಕುವೆಂಪುರವರಿಗಿಂತ ಮುಂಚೆನೆ ಹೇಮಾವತಿ ಅಮ್ಮ ತೀರಿಕೊಂಡು ಬಿಟ್ಟಿದ್ದರು. ಸುಮಾರು ವರುಷಗಳ ಮುಂಚೆನೆ ಅಂತ ಅನ್ನಿ.
ಹೇಮಾವತಿ ಅಮ್ಮನವರು ತೀರಿಕೊಂಡ ಕೆಲ ವರುಷಗಳ ನಂತರ ಕುವೆಂಪುರವರು ತೀರಿಕೊಂಡರು.
ನಾನು ಹೌದು, ಅದಕ್ಕೆನಿಗ ಎಂದೆ. ನನಗೆ ಕೊಂಚ ಆಸಕ್ತಿಯುಂಟಾಯಿತು. ಮುಂದೆ ಎನು ಎಂದು ಕೇಳಿದೆ.
ಆತ ಮುಗುಳ್ನಕ್ಕು ಮುಂದುವರೆಸಿದ,
ಕುವೆಂಪುರವರು ತೀರಿಕೊಂಡ ನಂತರ, ಅವರು ನೇರವಾಗಿ ಸ್ವರ್ಗಕ್ಕೆ ಹೋದರು..ಆದರೆ ಸ್ವರ್ಗದ ಬಾಗಿಲಿನಲ್ಲಿ ನಿಂತಿದ್ದ ದ್ವಾರಪಾಲಕ ಕುವೆಂಪುರವರನ್ನು ಒಳ ಬಿಡದೆ ವಿಚಾರಿಸಿದ.
(ಕುವೆಂಪು ದಂಪತಿಗಳು)
ಕುವೆಂಪು ಹೇಳಿದರು,
ನಾನು ರಾಷ್ಟ್ರಕವಿ,
ಊಂಹು, ದ್ವಾರಪಾಲಕ ಒಳಬಿಡಲಿಲ್ಲ.
ಮಹಾಕವಿ ಮತ್ತೆ ಹೇಳಿದರು,
ನಾನು ಪದ್ಮವಿಭೂಷಿತ, ಪಂಪ ಪ್ರಶಶ್ತಿ ಪುರಸ್ಕ್ರತ,
ಶ್ರೀ ರಾಮಾಯಣಂ ಮಹಾದರ್ಶನಂ ಎಂಬ ಮಹಾಕಾವ್ಯವನ್ನು ರಚಿಸಿದ್ದೆನೆ. ನಾನಾರು ಎಂದು ಗೊತ್ತಿಲ್ಲವೆ ಮೂರ್ಖ ಎಂದರು...
ದ್ವಾರಪಾಲಕನ ಮೇಲೆ ಯಾವ ಪರಿಣಾಮವು ಬೀರಲಿಲ್ಲ.
ಸ್ವರ್ಗದ ಬಾಗಿಲು ತೆರೆಯಲೆ ಇಲ್ಲ...
ಕುವೆಂಪುರವರು ಕೊನೆಗೆ ಹೇಳಿದರು,
ಸರಿ ನಾನು ಹೇಮಿಯ ಗಂಡ, ಗೊತ್ತಾಯಿತೆ??
ಎನಾಶ್ಚರ್ಯ!!!!! ತಕ್ಷಣವೆ ಸ್ವರ್ಗದ ಬಾಗಿಲು ತೆರೆಯಿತು.
ಕುವೆಂಪುರವರು ಒಳಗೆ ಹೋದರು.
ನಾನು ಮಗುವಿನಂತೆ ಅದನ್ನು ಕೇಳುತ್ತಿದ್ದೆ. ಆರಂಭದಲ್ಲಿ ನನಗೆ ಎನೂ ಹೋಳೆಯಲಿಲ್ಲ.
ಸ್ವರ್ಗದ ಬಾಗಿಲು ತೆರೆಯಲು, ಯಾವ ಬಿರುದು ಬಾವಲಿಗಳು ಬೇಕಾಗಲಿಲ್ಲ.. ಅಭಿಮಾನದ ಮಾತೊಂದು ಸಾಕಾಯಿತು..ಅಲ್ಲವೆ...
ಆತ ಮುಗುಳ್ನಗುತ್ತಿದ್ದ...
ನನಗೆ ನಗು ಬರಲಿಲ್ಲ, ಆದರೆ ನಿಜಕ್ಕೊ ನನಗೆ ಜ್ಙಾನೋದಯವಾಗಿತ್ತು. ಸಂಸಾರದಲ್ಲಿ ಇಂತಹ ಜ್ಞಾನೋದಯಗಳು ಬೇಕು..
ತಪ್ಪು ಎಲ್ಲಾಗುತ್ತಿದೆ ಎಂದು ಕಂಡುಹಿಡಿಯಲು ನನಗೆ ಬಹಳ ಹೊತ್ತು ಬೇಕಾಗಲಿಲ್ಲ.
ಅಲೆಗಳು ಇನ್ನೊ, ಒಂದೆ ಸಮನೆ ದಡಕ್ಕೆ ಬಡಿಯುತ್ತಿದ್ದವು...
ನಾವು ಮತ್ತದೆ ಮೌನವನ್ನು ಹೊತ್ತು ಮನೆ ಕಡೆಗೆ ಸಾಗುತ್ತಿದ್ದೆವು...
ಈ ಬಾರಿ ನನ್ನವಳ ಬಗೆಗಿನ ಅಭಿಮಾನದ ಖುಷಿ ನನ್ನೊಳಗಿತ್ತು.
🖋 ನಾಗೇಶ ಮುದ್ದಾಳೆ......
ಬದುಕು ಹಾಗೆ, ನಾವು ಆಂತರಿಕವಾಗಿ ತುಂಬಿದ್ದರೆ ಮಾತ್ರ, ಜೀವನವನ್ನು ಎದುರಿಸಲು ಸಾಧ್ಯ. ಇಲ್ಲದಿದ್ದರೆ ಬದುಕು ನೀರಸವೆನಿಸುತ್ತದೆ.....ಈ ಸಾಲು ಬಲು ಇಷ್ಟವಾಯಿತು. ಚನ್ನಾಗಿದೆ.
ಪ್ರತ್ಯುತ್ತರಅಳಿಸಿಆಂತರಿಕವಾಗಿ ಬದುಕು ಎದುರಿಸಬೇಕು..ನಿಜ.🙏🙏
ಪ್ರತ್ಯುತ್ತರಅಳಿಸಿತುಂಬಾ ಒಳ್ಳೆಯ ಕಥೆ ಸರ್ . ಅರ್ಥ ಮಾಡಿಕೊಂಡು ಬದುಕಿದರೆ ಅದೇ ಸ್ವರ್ಗ ಸುಖ.
ಪ್ರತ್ಯುತ್ತರಅಳಿಸಿ